ಡನೈಟ್ -
ಮಹಾಪ್ರತ್ಯಾಮ್ಲದ ಇಲ್ಲವೆ ಮಹಾಕ್ಷಾರದ ಅಗ್ನಿಶಿಲೆ. ಇದರಲ್ಲಿ ಓಲಿವಿನ್ ಖನಿಜವೇ ಪ್ರಮುಖಾಂಶ. ಆದ್ದರಿಂದ ಇದನ್ನು ಏಕ ಖನಿಜಶಿಲೆ ಎಂದೂ ಕರೆಯುವುದಿದೆ. ಕೆಲವೊಂದು ಸಂದರ್ಭಗಳಲ್ಲಿ ಇಲ್ಮನೈಟ್, ಕ್ರೋಮೈಟ್ ಮುಂತಾದ ಖನಿಜಗಳೂ ಇರುವುದುಂಟು. ನ್ಯೂಜೀóಲೆಂಡಿನ ಡನ್ ಎಂಬ ಪರ್ವತಶಿಖರ ಪ್ರದೇಶದಲ್ಲಿ ಇದು ಮೊತ್ತಮೊದಲಿಗೆ ದೊರೆತದ್ದರಿಂದ ಡನೈಟ್ ಎಂಬುದೇ ಈ ಶಿಲೆಗೆ ಅನ್ವರ್ಥನಾಮವಾಗಿದೆ. ಇದರ ಬಣ್ಣ ಹಳದಿ ಮಿಶ್ರಿತ ಹಸಿರು. ವಿವಿಧ ಛಾಯೆಗಳಲ್ಲೂ ಕಂಡುಬರುವುದುಂಟು. ಇದರಲ್ಲಿನ ಸಿಲಿಕಾಂಶ 45% ಕ್ಕಿಂತ ಕಡಿಮೆ. ಕಬ್ಬಿಣ ಮತ್ತು ಮೆಗ್ನೀಸಿಯಮ್ ಖನಿಜಗಳೂ ಇರುತ್ತವಾದ್ದರಿಂದ ಶಿಲೆಯ ಸಾಂದ್ರತೆ ಅಧಿಕ. ಡನೈಟ್ ಶಿಲೆ ಮುಖ್ಯವಾಗಿ ಕ್ರೋಮಿಯಮ್ ಅದುರಿನ ಆಕರ. (ಕ್ರೋಮಿಯಮ್ ಅದುರು ನಿಕ್ಷೇಪಗಳು ರೂಪಾಂತರಿತ ಶಿಲಗಳಾದ ಸರ್‍ಪೆಂಟಿನೈಟ್, ಪೈರಾಕ್ಸಿನೇಟ್ ಮುಂತಾದವುಗಳಲ್ಲೂ ಅಡಕವಾಗಿವೆ.) ಇದರ ಜೊತೆಗೆ ಡನೈಟ್ ಶಿಲಯಲ್ಲಿ ತಾಮ್ರದ ಅದುರು, ಪ್ಲಾಟಿನಮ್ ಅದುರು. ವಜ್ರ ಮುಂತಾದವೂ ಸಿಗುವುದುಂಟು. ಭಾರತದಲ್ಲಿ ಕ್ರೋಮೈಟು ಅದುರು ಲಭಿಸಿರುವುದು ಡನೈಟ್ ಶಿಲೆಗಳಿಂದಲೇ. ಕರ್ನಾಟಕದ ಹಾಸನ ಜಿಲ್ಲೆಯ ಬೈರಾಪುರ ಮತ್ತು ಮೈಸೂರು ಜಿಲ್ಲೆಯ ಸಿಂಧುವಳ್ಳಿ, ಕಡಕೊಳ-ಈ ಪ್ರದೇಶಗಳಲ್ಲಿ ದೊರೆಯುವ ಡನೈಟ್ ಶಿಲೆಗಳಲ್ಲಿ ಕ್ರೋಮೈಟ್ ಅದುರಿನ ಅಂಶ ಹೆಚ್ಚಾಗಿದೆ.
(ಟಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ